ಯೂನಿಕೋಡ್ ಮತ್ತು ಕನ್ನಡ

ಯೂನಿಕೋಡ್ ಮತ್ತು ಕನ್ನಡ

ಇತ್ತೀಚೆಗೆ ವಿಂಡೋಸ್ ಎಕ್ಸ್ಪಿ ಹಾಗೂ 2003 ಗಣಕ ಕಾರ್ಯಾಚರಣ ವ್ಯವಸ್ಥೆಗಳು ಬಳಕೆಗೆ ಬರುತ್ತಿವೆ; ಲೈನಕ್ಸ್ ಕಾರ್ಯಾಚರಣ ವ್ಯವಸ್ಥೆಯೂ ಜನಪ್ರಿಯವಾಗುವ ಲಕ್ಷಣಗಳಿವೆ. ಇದರೊಂದಿಗೆ ಯೂನಿಕೋಡ್ ಎಂಬ ಹೊಸ ಸಂಕೇತ ವ್ಯವಸ್ಥೆಯೂ ಜಾರಿಗೆ ಬರುತ್ತಿದೆ. ಈ ಎರಡೂ ಬಗೆಯ ಸಂಕೇತ ವ್ಯವಸ್ಥೆಗಳಿಂದ ಗಣಕಗಳ ಬಳಕೆದಾರರಿಗೆ ಅನೇಕಾನೇಕ ಅನುಕೂಲತೆಗಳು ಒದಗುತ್ತಿವೆ. ವಿವಿಧ ಕಾರ್ಯಾಚರಣ ವ್ಯವಸ್ಥೆಗಳ ನೂತನ ಆವೃತ್ತಿಗಳಲ್ಲಿ ನೀಡಿರುವ ಹೆಚ್ಚಿನ ಸೌಲಭ್ಯಗಳನ್ನು ಅರಿತು ಬಳಸಿಕೊಳ್ಳುವುದಷ್ಟೇ ಬಳಕೆದಾರರ ಕೆಲಸವಾಗಿದೆ. ಯೂನಿಕೋಡ್ ವ್ಯವಸ್ಥೆಯು ಗಣಕದ ಆಂತರಿಕ ವ್ಯವಹಾರ ಮತ್ತು ಗಣಕ ಕಾರ್ಯಾಚರಣ ವ್ಯವಸ್ಥೆಯ ತಾಂತ್ರಿಕ ಕ್ರಿಯೆಗಳಿಗೆ ಸಂಬಂಧಿಸಿದ್ದು. ಇದು ಬಳಕೆದಾರರ ತಿಳಿವಳಿಕೆಗೆ ಬರುವುದಿಲ್ಲ ಮತ್ತು ಬಳಕೆದಾರರು ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಬಳಕೆದಾರರು ಎಂದಿನಂತೆ ಗಣಕವನ್ನು ಚಾಲನೆಗೊಳಿಸಿ ಈಗಾಗಲೇ ಬಳಸುತ್ತಿರುವ ಕೀಲಿಮಣೆಯನ್ನೇ ಎಂದಿನಂತೆಯೇ ಬಳಸಬಹುದು. ಕನ್ನಡಕ್ಕೆ ಸಂಬಂಧಿಸಿದಂತೆಯೂ ಈಗಿರುವ ಕೀಲಿಮಣೆ ವಿನ್ಯಾಸ ಅಂತೆಯೇ ಬಳಕೆಗೆ ದೊರಕುತ್ತದೆ. 

ಆಸ್ಕಿ (ASCII) ಮತ್ತು ಇಸ್ಕಿ (ISCII) ಸಂಕೇತಗಳು

ಯಾವುದೇ ಭಾಷೆಯ ಅಕ್ಷರಗಳು/ಅಕ್ಷರಭಾಗಗಳು ಅಥವಾ ಚಿಹ್ನೆಗಳನ್ನು ಗಣಕ ಸ್ಮರಣಕೋಶಗಳಲ್ಲಿ ದ್ವಿಮಾನಾಂಕ ಸಂಖ್ಯೆಗಳನ್ನಾಗಿ ಶೇಖರಿಸಿಡಲಾಗುತ್ತದೆ (ಅಂದರೆ 0 ಮತ್ತು 1 ಎರಡೇ ಸಂಕೇತಗಳನ್ನು ಬಳಸುವ ಸಂಖ್ಯೆಗಳು). ಸ್ಮರಣಕೋಶದ ರಚನೆಯಲ್ಲಿ ಅನುಸರಿಸಿರುವ ಶಿಷ್ಟತೆಯಂತೆ ಅಕ್ಷರಗಳು/ಚಿಹ್ನೆಗಳನ್ನು ಪ್ರತಿನಿಧಿಸಲು 256 ಅವಕಾಶಗಳು ಮಾತ್ರ ದೊರಕುತ್ತವೆ. ಅಂದರೆ ಪ್ರತಿ ಅಕ್ಷರವನ್ನೂ ಸ್ಮರಣಕೋಶವೊಂದರಲ್ಲಿ 0 ಯಿಂದ 255 ರವರೆಗೆ ಯಾವುದೇ ಒಂದು ಸಂಖ್ಯೆಯಿಂದ ಪ್ರತಿನಿಧಿಸಲು ಸಾಧ್ಯ. ಇದನ್ನೇ ಆಸ್ಕಿ (ASCII - American Standard Code for Information Interchange) ಎಂಬ ಹೆಸರಿನಿಂದ ಕರೆಯುತ್ತಾರೆ. ಇಂಗ್ಲಿಷ್ನಲ್ಲಿ A ಯಿಂದ Z ವರೆಗೆ ಮತ್ತು a ಯಿಂದ z ವರೆಗೆ ಮಾತ್ರ ಅಕ್ಷರಗಳಿರುವುದರಿಂದ ಇಂಗ್ಲಿಷ್ಗಾಗಿ ಗಣಕದಲ್ಲಿ ಒಟ್ಟು 52 ಅವಕಾಶಗಳು ಮಾತ್ರ ಸಾಕು. ಈ 52 ಅಗತ್ಯಗಳಿಗಾಗಿ 52 ಸಂಖ್ಯೆಗಳನ್ನು ಗೊತ್ತುಪಡಿಸಲಾಗಿದೆ. ಇಂಗ್ಲಿಷ್ ಅಕ್ಷರಗಳನ್ನು ಕ್ರಮವಾಗಿ 65 ರಿಂದ 122 ವರೆಗಿನ ಸಂಖ್ಯೆಗಳನ್ನಾಗಿ (ಅಂದರೆ A=65, B=66, a=97, x=120, y=121 ಇತ್ಯಾದಿ ಶಿಷ್ಟತೆಗೊಳಪಡಿಸಿ) ಗುರುತಿಸಿದ್ದು ಇದನ್ನು ಅಂತಾರಾಷ್ಟ್ರೀಯ ಶಿಷ್ಟತೆಯನ್ನಾಗಿ ಒಪ್ಪಿಕೊಳ್ಳಲಾಗಿದೆ.
 

ಕನ್ನಡದಲ್ಲಾದರೋ ಸ್ವರಗಳು, ವ್ಯಂಜನಗಳು ಹಾಗೂ ವಿಶೇಷ ಚಿಹ್ನೆಗಳು ಸೇರಿ 51 ಮೂಲಭೂತ ಅಕ್ಷರಗಳಿದ್ದರೂ ವ್ಯಂಜನಗಳೊಡನೆ ಸ್ವರಗಳು ಸೇರಿದ ಗುಣಿತಾಕ್ಷರಗಳು, ಒಂದಕ್ಕಿಂತ ಹೆಚ್ಚು ವ್ಯಂಜನಗಳು ಸೇರಿದ ಸಂಯುಕ್ತಾಕ್ಷರಗಳು ಬೇರೆ ಬೇರೆ ಆಕಾರಗಳನ್ನು ತಳೆದು ಸಹಸ್ರಾರು ಸಂಖ್ಯೆಯ ಪ್ರದರ್ಶನಾಕ್ಷರಗಳಾಗುತ್ತವೆ. ಅದೃಷ್ಟವಶಾತ್ ಗಣಕಗಳ ಉನ್ನತ ತಾಂತ್ರಿಕತೆಯ ಕಾರಣದಿಂದ ಒಟ್ಟು ಸುಮಾರು 150 ಅಕ್ಷರಭಾಗಗಳಿಂದ ಇವೆಲ್ಲವನ್ನೂ ಪಡೆಯಬಹುದು. ಉದಾಹರಣೆಗೆ, `ಸ್ತ್ರೀ' ಎಂಬ ಸಂಯುಕ್ತಾಕ್ಷರಕ್ಕೆ ಗಣಕದಲ್ಲಿ ಶೇಖರಿಸಿಡಲಾಗಿರುವ ` ಸಿ, ,  ಮತ್ತು ' ಅಕ್ಷರಭಾಗಗಳನ್ನು ಹಾಗೂ `ತ್ರ್ಯೋ' ಸಂಯುಕ್ತಾ ಕ್ಷರಕ್ಕೆ ` ತ ,   , , ಮತ್ತು ' ಅಕ್ಷರಭಾಗಗಳನ್ನು ಬಳಸಲಾಗುತ್ತದೆ. ಈ ಅಕ್ಷರಭಾಗಗಳಿಗೆ ಆಸ್ಕಿಯ 65 ನೇ ಸಂಖ್ಯೆಯಿಂದ ಆರಂಭಿಸಿ ಅಕ್ಷರ ಸಂಕೇತಗಳನ್ನು ನಿಗದಿಪಡಿಸಲಾಗುತ್ತದೆ. ಆದರೆ, ಈ ರೀತಿಯ ಅಕ್ಷರಭಾಗಗಳ ಸಂಕೇತೀಕರಣದಿಂದ ಗಣಕಗಳಲ್ಲಿ ದಾಖಲಾಗುವ ಮಾಹಿತಿಗಳ ಅಕಾರಾದಿ ವರ್ಗೀಕರಣ ಮುಂತಾದ ಭಾಷಾ ಸಂಬಂಧಿತ ಅತ್ಯಗತ್ಯ ಕ್ರಿಯೆಗಳನ್ನು ನಡೆಸಲಾಗುವುದಿಲ್ಲ. ಆದ್ದರಿಂದಲೇ ಈ ಮಾಹಿತಿಗಳನ್ನು ಗಣಕದೊಳಗೆ ಸ್ವರ ವ್ಯಂಜನಗಳ ಮೂಲಾಕ್ಷರಗಳನ್ನಾಗಿ ಪರಿವರ್ತಿಸಬೇಕು (ಉದಾಹರಣೆಗೆ ಕನ್ನಡ ಪದವನ್ನು ಗಣಕದೊಳಗೆ `ಕನ್ನಡ' ಎಂದು, `ಸ್ತ್ರೀ' ಅಕ್ಷರವನ್ನು `ಸ್ತ್ರ್ಈ' ಎಂದು ಕೇವಲ ಸ್ವರಗಳು ಮತ್ತು ವ್ಯಂಜನಗಳಿರುವ ಮೂಲಾಕ್ಷರಗಳ ರೂಪಕ್ಕೆ ಪರಿವರ್ತಿಸುವುದು). ಕನ್ನಡ ಭಾಷೆಯ ಧ್ವನ್ಯಾತ್ಮಕತೆ ಮತ್ತು ವೈಜ್ಞಾನಿಕತೆಯ ಗುಣಗಳ ಕಾರಣದಿಂದ ಇಂತಹ ಪರಿವರ್ತನೆ ಯನ್ನು ಕರಾರುವಾಕ್ಕಾಗಿ ಮಾಡಬಹುದು. ಈ ಮೂಲಾಕ್ಷರಗಳಿಗೂ ಪ್ರತ್ಯೇಕ ASCII ಸಂಕೇತಗಳನ್ನು ಗೊತ್ತುಪಡಿಸಿ ಮೇಲ್ಕಂಡ ಭಾಷಾ ಸಂಸ್ಕರಣೆಯ ಕಾರ್ಯಗಳನ್ನು ಕೈಗೊಳ್ಳಬೇಕು. ಹೀಗೆ ಗುಣಿತಾಕ್ಷರ ಮತ್ತು ಸಂಯುಕ್ತಾಕ್ಷರಗಳನ್ನು ಮೂಲಾಕ್ಷರಗಳಿಗೆ ಪರಿವರ್ತಿಸುವ ಮತ್ತು ಮೂಲಾಕ್ಷರಗಳಿಗೆ ಆಸ್ಕಿ ಸಂಕೇತಗಳನ್ನು ಗುರುತಿಸುವ ಕ್ರಿಯೆಗಳನ್ನು ಸಾಧಿಸಲು ಅಗತ್ಯವಾದ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಬಹುದು. ಈ ತಾತ್ಕಾಲಿಕ ಬದಲೀಕರಣ ಮತ್ತು ಸಂಕೇತೀಕರಣಗಳು ಗಣಕಗಳ ಆಂತರಿಕ ಕ್ರಿಯೆಗಳು. ಒಟ್ಟಿನಲ್ಲಿ ಗಣಕದಲ್ಲಿ ಬಳಸುವಾಗ ಕನ್ನಡ ಅಥವಾ ಇಂತಹುದೇ ಇತರ ಭಾಷೆಗಳಿಗೆ (1) ಅಕ್ಷರಭಾಗಗಳ ಸಂಕೇತೀಕರಣ ಮತ್ತು (2) ಮೂಲಾಕ್ಷರಗಳ ಸಂಕೇತೀಕರಣ ಎರಡೂ ಅವಶ್ಯಕ. ಆದರೆ ಕೇವಲ ಮೂಲಾಕ್ಷರಗಳನ್ನು ಮಾತ್ರವೇ ಉಳ್ಳ ಲಿಪಿ ವ್ಯವಸ್ಥೆಯ ಇಂಗ್ಲಿಷ್ನಂತಹ ಭಾಷೆಗಳಿಗೆ ಈ ಎರಡು ವಿಧದ ಸಂಕೇತೀಕರಣದ ಅವಶ್ಯಕತೆ ಇರುವುದಿಲ್ಲ.
 

ಎಂಟು ಅಂಕಿಗಳ ಆಸ್ಕಿ ವ್ಯವಸ್ಥೆಯನ್ನು ಆಧರಿಸಿ ಈಗಾಗಲೇ ಅಭಿವೃದ್ಧಿಗೊಂಡು ಬಳಸಲ್ಪಡುತ್ತಿರುವ ವಿವಿಧ ಭಾಷಾ ಲಿಪಿ ತಂತ್ರಾಂಶಗಳು ಸಾಮಾನ್ಯವಾಗಿ ಅಕ್ಷರಭಾಗ ಸಂಕೇತಗಳನ್ನೇ ಗಣಕಗಳಲ್ಲಿ ಶೇಖರಿಸಿಡುತ್ತಿವೆ. ಆದ್ದರಿಂದ ಮೂಲಾಕ್ಷರ ಸಂಕೇತಗಳನ್ನು ಕಾಪಿಡುವ ಹಾಗೂ ಇಸ್ಕಿ ವ್ಯವಸ್ಥೆಯು ತಂದೊಡ್ಡುವ ಸಮಸ್ಯೆಗಳು ನಮ್ಮ ಭಾಷೆಗಳನ್ನು ಕಾಡುತ್ತಿಲ್ಲ; ಅಲ್ಲದೆ ಭಾಷಾ ಸಂಸ್ಕರಣೆಗಾಗಿ ಇಸ್ಕಿಯ ಬದಲು ಎಲ್ಲ ಭಾರತೀಯ ಭಾಷಾ ಬಾಂಧವರೂ ಆಯಾ ಭಾಷೆಗಳ ಭಾಷಾ ಸಂಸ್ಕರಣಾ ಕ್ರಿಯೆಗಳಿಗೆ ಪ್ರತ್ಯೇಕ ಪರಿಹಾರಗಳನ್ನು ಕಂಡುಕೊಳ್ಳುವ ಹಾದಿಯಲ್ಲಿ ವಿಶಿಷ್ಟ ಸಂಕೇತೀಕರಣ ಮಾರ್ಗವನ್ನು ಅನುಸರಿಸ ಬಹುದು. ಕನ್ನಡಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಂತಹ ಯಶಸ್ವೀ ಮಾರ್ಗವನ್ನು ಕಂಡುಕೊಳ್ಳಲಾಗಿದೆ.

ಯೂನಿಕೋಡ್ (UNICODE):

ಯೂನಿಕೋಡ್ ಎಂಬುದು 8 ಅಂಕಿಸ್ಥಾನಗಳುಳ್ಳ ಆಸ್ಕಿಗೆ ಬದಲಾಗಿ 16 ಅಂಕಿಸ್ಥಾನಗಳುಳ್ಳ, ಎಲ್ಲ ಭಾಷೆಗಳ ಮೂಲಾಕ್ಷರಗಳಿಗೆ ನಿಗದಿತವಾಗಿರುವ ಸಂಕೇತಗಳ ಸೂಚಿ. ಈ ಸಂಕೇತೀಕರಣವನ್ನೇ ಎಲ್ಲ ಭಾಷೆಗಳೂ ಅಧಿಕೃತ ಅಂತಾರಾಷ್ಟ್ರೀಯ ಶಿಷ್ಟತೆ ಎಂದು ಪರಿಗಣಿಸಿ ಬಳಸಲು ಆರಂಭಿಸಿದ್ದಾರೆ. ಹೀಗೆ ಹೊಸದಾಗಿ ರೂಪಿತವಾಗಿರುವ 16 ಅಂಕಿಸ್ಥಾನಗಳುಳ್ಳ ಯೂನಿಕೋಡ್ನಲ್ಲಿ ಭಾರತೀಯ ಭಾಷೆಗಳಿಗೆ ಎಂಟು ಅಂಕಿಸ್ಥಾನಗಳುಳ್ಳ ಇಸ್ಕಿಯನ್ನೇ (ಮೂಲಾಕ್ಷರ ಸಂಕೇತಗಳು) ಆಧಾರವಾಗಿಟ್ಟುಕೊಳ್ಳಲಾಗಿದೆ. ಈ ನೂತನ ವ್ಯವಸ್ಥೆಯಲ್ಲಿ ಗಣಕಕ್ಕೆ ಊಡಿಸುವ ಎಲ್ಲ ಮಾಹಿತಿಗಳನ್ನೂ ಯೂನಿಕೋಡ್ ಸಂಕೇತಗಳನ್ನಾಗಿಯೇ (ಮೂಲಾಕ್ಷರ ಸಂಕೇತಗಳನ್ನಾಗಿ) ಗಣಕಗಳಲ್ಲಿ ಶೇಖರಿಸಿಡಲಾಗುವುದು. ಮಾಹಿತಿಗಳನ್ನು ಗಣಕದ ತೆರೆಯ ಮೇಲೆ ಮೂಡಿಸಲು ಅಥವಾ ಕಾಗದದ ಮೇಲೆ ಮುದ್ರಿಸಲು ಮೊದಲಿಗೆ ಗಣಕಗಳೊಳಗೆ ಈ ಮೂಲಾಕ್ಷರ ಸಂಕೇತಗಳನ್ನು ಅಕ್ಷರಭಾಗ ಸಂಕೇತಗಳನ್ನಾಗಿ ಪರಿವರ್ತಿಲಾಗುವುದು. ಈ ಪರಿವರ್ತಿತ ಅಕ್ಷರಭಾಗ ಸಂಕೇತಗಳಿಗೆ ಗೊತ್ತುಪಡಿಸಿದ ನಿರ್ದಿಷ್ಟ ಲಿಪಿಯ ಅಕ್ಷರಭಾಗಗಳು ಅಂದವಾಗಿ ಜೋಡಣೆಗೊಂಡು ತೆರೆಯಮೇಲೆ ಮೂಡುತ್ತವೆ ಅಥವಾ ಕಾಗದದ ಮೇಲೆ ಮುದ್ರಣಗೊಳ್ಳುತ್ತವೆ. ಇದಿಷ್ಟು ಯೂನಿಕೋಡ್ ವೃತ್ತಾಂತ.
 

ಯೂನಿಕೋಡ್ನ ಅನುಕೂಲತೆಗಳು ಮತ್ತು ಯೂನಿಕೋಡ್ಗೆ ಬದಲಾಯಿಸುವಾಗ ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಈಗ ಪರಿಶೀಲಿಸೋಣ.

ಅನುಕೂಲತೆಗಳು:

ಈಗಾಗಲೇ ತಿಳಿಸಿರುವಂತೆ ಆಸ್ಕಿ ಸಂಕೇತೀಕರಣದಲ್ಲಿ ಎಲ್ಲಾ ಭಾಷೆಗಳಿಗೂ ಕೇವಲ 256 ಸ್ಥಾನಗಳುಳ್ಳ ಒಂದೇ ಒಂದು ಸಂಕೇತಾಂಕಣವಿರುತ್ತದೆ. ಅಂದರೆ ಒಂದು ಭಾಷೆಗೆ ಬಳಸುವ ಸಂಖ್ಯಾ ಸಂಕೇತಗಳನ್ನೇ ಬೇರೊಂದು ಭಾಷೆಗೂ ಬಳಸಬೇಕು. ಆದ್ದರಿಂದ ಗಣಕದಲ್ಲಿ ಒಂದು ಭಾಷೆಯನ್ನು ಬಳಸುವ ಕ್ರಿಯೆಯು ಚಾಲ್ತಿಯಲ್ಲಿರುವಾಗ ಬೇರೊಂದು ಭಾಷೆಯನ್ನು ಬಳಸಲು ಆಗುವುದಿಲ್ಲ. ಆದ್ದರಿಂದ ಒಂದೇ ವಾಕ್ಯದಲ್ಲಿ ವಿವಿಧ ಭಾಷಾ ಲಿಪಿಗಳನ್ನು ಬಳಸಲು ಅನೇಕ ತೊಡಕುಗಳುಂಟಾಗುತ್ತವೆ. ಆದರೆ ಯೂನಿಕೋಡ್ ಸಂಕೇತೀಕರಣ ವ್ಯವಸ್ಥೆಯಲ್ಲಿ ಪ್ರತಿಯೊಂದು ಭಾಷೆಗೂ 256 ಸ್ಥಾನಗಳ ಪ್ರತ್ಯೇಕ ಅಂಕಣವಿರುತ್ತದೆ. ಅಂದರೆ ತಲಾ 256 ಪ್ರತ್ಯೇಕ ಸಂಖ್ಯಾ ಸಂಕೇತಗಳುಳ್ಳ 256 ಉಪಅಂಕಣಗಳಲ್ಲಿ 256 ಭಾಷೆಗಳನ್ನು ಅಳವಡಿಸಬಹುದಾಗಿದೆ. ಹೀಗೆ ರೂಪಿಸಲಾಗಿರುವ ಯೂನಿಕೋಡ್ನಿಂದ ಉಂಟಾಗುವ ಅನುಕೂಲತೆಗಳ ಪೈಕಿ ಬಹುಮುಖ್ಯವಾದ ಕೆಲವನ್ನು ಕೆಳಗೆ ಪಟ್ಟಿಮಾಡಲಾಗಿದೆ.

  1. ಗಣಕಗಳಲ್ಲಿ ಬಹುಭಾಷಾ ಬಳಕೆಗೆ ಅನಿರ್ಬಂಧಿತ ಅವಕಾಶಗಳು ದೊರಕುತ್ತವೆ. ಬಹುಮುಖ್ಯವಾಗಿ ಗಣಕಗಳಲ್ಲಿ ಬಹುಭಾಷಾ ಬಳಕೆಯು ಸುಲಭವಾಗುತ್ತದೆ. ಅಂದರೆ ಒಂದೇ ಅಕ್ಷರಶೈಲಿಯಲ್ಲಿ ಬೇರೆ ಬೇರೆ ಭಾಷಾ ವಿಭಾಗಗಳಿರಲು ಸಾಧ್ಯ. ಆದ್ದರಿಂದ ಒಂದೇ ವಾಕ್ಯದಲ್ಲಿ ನಮಗೆ ಬೇಕಾದ ವಿವಿಧ ಭಾಷಾ ಮಾಹಿತಿಗಳನ್ನು ಕೀಲಿಸುವಂತಹ ವ್ಯವಸ್ಥೆಯನ್ನು ರೂಪಿಸಬಹುದು; ಎಲ್ಲ ಭಾಷೆಗಳಿಗೆ ಆಗುವಂತೆ ಅನ್ವಯಿಕ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿ ಸಾರ್ವತ್ರೀಕರಿಸಬಹುದು.
  2. ಅಂತರಜಾಲ, ವಿದ್ಯುನ್ಮಾನ ಅಂಚೆ ಸೌಲಭ್ಯಗಳು ಬಹುಭಾಷಾ ಮಾಧ್ಯಮದಲ್ಲಿರುವಂತೆ ಮಾಡಬಹುದು.

ಒಟ್ಟಿನಲ್ಲಿ ಯೂನಿಕೋಡ್ನಿಂದ ಗಣಕಗಳು ಎಲ್ಲ ಭಾಷಾಬಾಂಧವರ ಆಶೋತ್ತರಗಳಿಗೆ ಸುಲಭವಾಗಿ ಸ್ಪಂದಿಸುವಂತೆ ಮಾಡಬಹುದು.
 

ಯೂನಿಕೋಡ್ ಶಿಷ್ಟತೆ

ಈಗ ಯೂನಿಕೋಡ್ ಪದ್ಧತಿಗೆ ಬದಲಾಗಬೇಕೆಂದರೆ ಈಗಾಗಲೇ ಅಧಿಕೃತಗೊಂಡಿರುವ ಮೂಲಾಕ್ಷರಗಳು ಮತ್ತು ಅವುಗಳಿಗೆ ನಿಗದಿಗೊಳಿಸಿರುವ 16 ಅಂಕಿಸ್ಥಾನದ ಯೂನಿಕೋಡ್ ಸಂಕೇತಗಳನ್ನೇ ಬಳಸುವುದು ಅನಿವಾರ್ಯ. ಸುಮಾರು ಏಳು ವರ್ಷಗಳ ಹಿಂದೆಯೇ ಭಾರತೀಯ ಭಾಷೆಗಳಿಗೆ ಈ ಅಧಿಕೃತ ಯೂನಿಕೋಡ್ ಸಂಕೇತಗಳನ್ನು ನಿರ್ಧರಿಸುವಾಗ ಇಸ್ಕಿ ಸಂಕೇತ ವ್ಯವಸ್ಥೆಯನ್ನೇ ಆಧಾರವಾಗಿಟ್ಟುಕೊಳ್ಳಲಾಯಿತು. ಇದರಿಂದಾಗಿ ಇಸ್ಕಿಯಿಂದ ಉಂಟಾಗು ತ್ತಿದ್ದ ಸಮಸ್ಯೆಗಳು ಯೂನಿಕೋಡ್ನಲ್ಲೂ ಕಂಡುಬರುತ್ತಿವೆ. ಹೀಗೆ ಎಲ್ಲ ಭಾರತೀಯ ಭಾಷೆಗಳಲ್ಲೂ ಸಮಸ್ಯೆಗಳು ಉಂಟಾಗುತ್ತಿರುವುದನ್ನು ಮನಗಂಡ ಕೇಂದ್ರಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯು ಏರ್ಪಡಿಸುತ್ತಿರುವ ಸಭೆಗಳಲ್ಲಿ ಎಲ್ಲ ಭಾರತೀಯ ಭಾಷಾಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಈ ಸಭೆಗಳಲ್ಲಿ ನಡೆಯುವ ವಿಚಾರ ವಿನಿಮಯಗಳ ಪರಿಣಾಮವಾಗಿ ಯೂನಿಕೋಡ್ನ ಶಿಷ್ಟತೆಗಳಲ್ಲಿ ಪ್ರತಿಭಾಷೆಗೂ ಸಂಬಂಧಿಸಿದಂತೆ ಹಲವಾರು ಅಕ್ಷರಗಳು ಮತ್ತು ಸಂಕೇತಗಳು ಸೇರ್ಪಡೆಯಾಗಬೇಕಾದ ಅವಶ್ಯಕತೆಗಳು ಕಂಡುಬಂದವು. ಇಂತಹ ಅವಶ್ಯಕತೆಗಳನ್ನು ಅಂಗೀಕರಿಸಿ ಭಾರತೀಯ ಭಾಷೆಗಳೂ ಸೇರಿದಂತೆ ವಿಶ್ವದ ಎಲ್ಲ ಭಾಷೆಗಳಿಗಾಗಿ ಯೂನಿಕೋಡ್ನ ಬದಲಾದ ಆವೃತ್ತಿಗಳನ್ನು ಅಧಿಕೃತವಾಗಿ ಪ್ರಕಟಿಸುವವರು `ಯೂನಿಕೋಡ್ ಕನ್ಸೋರ್ಷಿಯಮ್' ಎಂಬ ಅಂತಾರಾಷ್ಟ್ರೀಯ ಒಕ್ಕೂಟ. ಭಾರತೀಯ ಭಾಷೆಗಳಿಗೆ ಸಂಬಂಧಿಸಿದಂತೆ ಅಗತ್ಯವಾದ ಬದಲಾವಣೆಗಳನ್ನು ಮಾಡಬೇಕೆಂಬ ಬೇಡಿಕೆಗಳನ್ನು ಮಂಡಿಸಿ ಒತ್ತಾಯಿಸ ಬೇಕಾದವರು ಈ ಒಕ್ಕೂಟದಲ್ಲಿ  ಅಧಿಕೃತ ಸದಸ್ಯತ್ವವನ್ನು ಪಡೆದಿರುವ ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ. ಈ ಇಲಾಖೆಗೆ ಸರಿಯಾದ ಮಾಹಿತಿಗಳನ್ನು ಒದಗಿಸುವುದು ಆಯಾ ಭಾಷಾ ಸರ್ಕಾರಗಳ ಜವಾಬ್ದಾರಿ. ಕನ್ನಡಕ್ಕೆ ಸಂಬಂಧಿಸಿದಂತೆ ಈ ಪ್ರಕ್ರಿಯೆಯು 1999ನೇ ಇಸವಿಯಲ್ಲಿ ಆರಂಭವಾಯಿತು. ಆ ಸಂದರ್ಭದಲ್ಲಿ ಹಲವಾರು ಹಿರಿಯ ಕನ್ನಡ ಭಾಷಾ ವಿದ್ವಾಂಸರು ಹಾಗೂ ಗಣಕತಜ್ಞರೊಡನೆ ವಿಪುಲವಾಗಿ ಚರ್ಚಿಸಿ 2000ನೆಯ ಇಸವಿಯ ವೇಳೆಗೆ ಕನ್ನಡಕ್ಕಾಗಿ ಯೂನಿಕೋಡ್ ದಾಖಲೆಯನ್ನು ಸಿದ್ಧಪಡಿಸಲಾಯಿತು. ಆ ವರ್ಷ ನವೆಂಬರ್ ತಿಂಗಳಲ್ಲಿ  ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯು ಏರ್ಪಡಿಸಿದ್ದ ಸಭೆಯಲ್ಲಿ ಇದನ್ನು ಮಂಡಿಸಲಾಯಿತು. ಆಗ ನಡೆದ ಚರ್ಚೆಗಳು ಮತ್ತು ಹೊರಬಂದ ಸಲಹೆಗಳು ಮುಂತಾದವನ್ನು ಪರಿಗಣಿಸಿ ಮತ್ತೆ ಹಲವಾರು ವಿಚಾರಗಳನ್ನು ಪರಿಶೀಲಿಸಿದ ನಂತರ 2001 ನೇ ಇಸವಿಯಲ್ಲಿ ನಡೆದ ಸಭೆಯಲ್ಲಿ `ಕನ್ನಡಕ್ಕಾಗಿ ಯೂನಿಕೋಡ್' ವರದಿಯನ್ನು ಸಿದ್ಧಪಡಿಸಲಾಯಿತು. ಇದನ್ನು ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಯೂನಿಕೋಡ್ ಕನ್ಸೋರ್ಷಿಯಮ್ ಸಂಸ್ಥೆಗೆ ಕಳುಹಿಸಲಾಯಿತು. ಇದರಲ್ಲಿನ ಕೆಲವು ಸಲಹೆಗಳನ್ನು ಯೂನಿಕೋಡ್ನ ನಾಲ್ಕನೆಯ ಆವೃತ್ತಿಯಲ್ಲಿ ಅಳವಡಿಸಲಾಗಿದೆ. ಹಲವಾರು ವಿಚಾರಗಳಿಗೆ ವಿವರಣೆಗಳನ್ನು ಪಡೆದ ನಂತರ ಕೆಲವು ಸಲಹೆಗಳನ್ನು ಬದಲಿಸಲಾಯಿತು. 
 

ಯೂನಿಕೋಡ್ ಕಾರ್ಯಾಗಾರ ಮತ್ತು ಕನ್ನಡ

ಯೂನಿಕೋಡ್ನ 4ನೇ ಆವೃತ್ತಿಯಯನ್ನು ಕುರಿತು ಸಮಾಲೋಚನೆಗಳನ್ನು ನಡೆಸುವ ಉದ್ದೇಶದಿಂದ ನವದೆಹಲಿಯಲ್ಲಿ 2003 ನೇ ಇಸವಿ ಸೆಪ್ಟಂಬರ್ 24, 25 ಮತ್ತು 26ನೇ ದಿನಾಂಕಗಳಂದು ಒಂದು ಕಾರ್ಯಾಗಾರ ವನ್ನು ಏರ್ಪಡಿಸಲಾಗಿತ್ತು. ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು MAIT (Manufacturers Association of Information Technology) ಸಂಸ್ಥೆಗಳು ಏರ್ಪಡಿಸಿದ್ದ ಈ ಸಭೆಯಲ್ಲಿ ಯೂನಿಕೋಡ್ ಕನ್ಸೋರ್ಷಿಯಂನ ತಾಂತ್ರಿಕ ಸಮಿತಿಯ ಸದಸ್ಯರು ಹಾಗೂ ಮೈಕ್ರೋಸಾಫ್ಟ್ ಕಂಪನಿಯ ಪ್ರತಿನಿಧಿಗಳು ಭಾಗವಹಿಸಿದ್ದರು. ಇದರಲ್ಲಿ ಭಾಗವಹಿಸಿದ್ದ ಎಲ್ಲ ಭಾರತೀಯ ಭಾಷಾ ಪ್ರತಿನಿಧಿಗಳೂ ತಮ್ಮ ತಮ್ಮ ಭಾಷೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ವಿವರಿಸಿ ಅವುಗಳಿಗೆ ಪರಿಹಾರಗಳನ್ನೂ ಸೂಚಿಸಿದರು. ಕನ್ನಡಕ್ಕೆ ಸಂಬಂಧಿಸಿದಂತೆ ಕೆಳಕಂಡ ವಿಚಾರಗಳನ್ನು ಮಂಡಿಸಲಾಯಿತು:

  1. ಕನ್ನಡ ಅಕ್ಷರಗಳ ಮೇಲೆ ಮೂಡಿಸಬೇಕಾದ ಕನ್ನಡ ವ್ಯಾಕರಣದ ಲು ಮತ್ತು ಗುರು ಚಿಹ್ನೆಗಳನ್ನು ಯೂನಿ ಕೋಡ್ನಲ್ಲಿ ಅಳವಡಿಸಿಲ್ಲ. ಇವುಗಳೊಡನೆ ವೇದಮಂತ್ರಗಳನ್ನು ಕನ್ನಡ ಲಿಪಿಯಲ್ಲಿ ಮುದ್ರಿಸಲು ಮತ್ತು ಇತರ ಭಾಷೆಗಳ ಧ್ವನ್ಯಾತ್ಮಕತೆಗೆ ಅನುವಾಗುವಂತೆ ಅಕ್ಷರಗಳ ಮೇಲೆ ಅಥವಾ ಕೆಳಗಡೆ ಗುರುತಿಸಬೇಕಾದ ಹಲವಾರು ಚಿಹ್ನೆಗಳೂ ಅಗತ್ಯವಾಗಿವೆ. ಆದರೆ ಈ ರೀತಿಯ ಚಿಹ್ನೆಗಳು ಎಲ್ಲ ಭಾರತೀಯ ಭಾಷಾ ಲಿಪಿಗಳಿಗೂ ಅಗತ್ಯವಾದುದರಿಂದ ಇಂತಹ ಎಲ್ಲಾ ಚಿಹ್ನೆಗಳನ್ನೂ ಒಟ್ಟುಗೂಡಿಸಿ ಇವುಗಳಿಗೆಂದೇ ಯೂನಿಕೋಡ್ನಲ್ಲಿ ಒಂದು ಪ್ರತ್ಯೇಕವಾದ ಸಂಕೇತಾಂಕಣವನ್ನು ಗೊತ್ತುಪಡಿಸಲಾಗಿದೆ. ಇದರಲ್ಲಿ ಲು ಮತ್ತು ಗುರು ಚಿಹ್ನೆಗಳನ್ನು ಅಳವಡಿಸಬೇಕು.
  2. ತುಳು ಮತ್ತು ಕೊಡವ ಭಾಷೆಗಳನ್ನು ಕನ್ನಡ ಲಿಪಿಯಲ್ಲೇ ಬರೆಯಲಾಗುತ್ತಿದೆ. ಈ ಬಳಕೆಯ ಹಾದಿಯು ಪರಿ ಪೂರ್ಣವಾಗಿರಲು ಕನ್ನಡಕ್ಕೆ ಇನ್ನೂ ಹಲವಾರು ಮೂಲಾಕ್ಷರಗಳು ಸೇರ್ಪಡೆಯಾಗಬೇಕೆಂಬ ಅಭಿಪ್ರಾಯವು ಕೇಳಿ ಬಂದಿದೆ. ಈ ಬಗ್ಗೆ ವ್ಯಾಪಕವಾದ ವಿಚಾರ ವಿನಿಮಯಗಳ ನಂತರ ಅಗತ್ಯಗಳನ್ನು ಗುರುತಿಸಿ ಯೂನಿಕೋಡ್ ಮುಂದಿನ ಆವೃತ್ತಿಗಳಲ್ಲಿ ಹೊಸ ಸೇರ್ಪಡೆಗಳನ್ನು ಮಾಡಬಹುದು.
  3. ಎಲ್ಲ ಭಾರತೀಯ ಭಾಷೆಗಳ ಮೊದಲ ಸ್ವರಕ್ಕೆ (ಅ) ಸಂಬಂಧಿಸಿದ ಸ್ವರಚಿಹ್ನೆಯ ( ಸೇರ್ಪಡೆ: ಈ ಚೆಹ್ನೆ ಇಲ್ಲದೆಯೂ ಭಾಷಾ ಸಂಸ್ಕರಣೆಗೆ ಪರ್ಯಾಯ ವಿಧಾನವನ್ನು ಅಳವಡಿಸಬಹುದು. ಆದ್ದರಿಂದ ಯೂನಿಕೋಡ್ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅನೇಕರು ಈ ವಿಚಾರದತ್ತ ತೀವ್ರ ಕುತೂಹಲವನ್ನು ವ್ಯಕ್ತಪಡಿಸಿ ಈ ಬಗ್ಗೆ ಇನ್ನೊಮ್ಮೆ ವ್ಯಾಪಕವಾದ ಚರ್ಚೆ, ವಿಚಾರ ವಿನಿಮಯಗಳು ನಡಯಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು. 
  4. ಕನ್ನಡಕ್ಕೆ ವಿಶೇಷವಾದ ಅರ್ಕಾವೊತ್ತಿನ ಸಮಸ್ಯೆಯನ್ನು ಪರಿಹರಿಸಲು ಈಗಾಗಲೇ ಪ್ರಚಲಿತವಿರುವ ಪರಿಹಾರ ವಿಧಾನವನ್ನು ಮೈಕ್ರೋಸಾಫ್ಟ್ನ ಯೂನಿಸ್ಕೈಬ್ ಎಂಜಿನ್ನಲ್ಲೂ ಅಳವಡಿಸಿದರೆ ಇದಕ್ಕಾಗಿ ಯೂನಿಕೋಡ್ನಲ್ಲಿ ಪ್ರತ್ಯೇಕವಾದ ಸ್ಥಾನವನ್ನು ಕಲ್ಪಿಸುವ ಅಗತ್ಯವಿಲ್ಲ ಎಂಬುದನ್ನು ಒಪ್ಪಲಾಯಿತು. ಈ ವಿಧಾನವನ್ನು `ನುಡಿ' ನೀಡುವ ಕನ್ನಡ ಭಾಷಾ ಸಂಸ್ಕರಣೆಯ ತಾಂತ್ರಿಕತೆಯಲ್ಲಿ ಬಳಸಲಾಗಿದೆ. ಇತರ ಭಾಷೆಗಳಿಗೆ ಸಂಬಂಧಿಸಿದಂತೆಯೂ ಇಂತಹ ಹಲವಾರು ಮಾರ್ಪಾಡುಗಳಿಗೆ ಒಪ್ಪಲಾಯಿತು.

ಅರ್ಕಾವೊತ್ತಿನ ಸಮಸ್ಯೆಗೆ ಯೂನಿಕೋಡ್ನಲ್ಲಿ ಅಂತಿಮ ಪರಿಹಾರರೂಪವಾದ ಒಂದು ಸಲಹೆಯನ್ನು ಇದೇ ವರ್ಷ ಜುಲೈ ತಿಂಗಳ ಕೊನೆಯ ವಾರದಲ್ಲಿ ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯು ಕಳುಹಿಸಿ ಅದಕ್ಕೆ ಸೂಕ್ತವಾದ ಪ್ರತಿಕ್ರಿಯೆಯನ್ನು ನೀಡಲು ಕೇಳಿಕೊಂಡಿತು. ಕನ್ನಡಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ, ಯೂನಿಕೋಡ್ ಒಕ್ಕೂಟ ಮತ್ತು ಮೈಕ್ರೋಸಾಫ್ಟ್  ಕಂಪನಿಗಳಿಗೆ ಇತ್ತೀಚೆಗೆ ತಾನೇ ಕಳುಹಿಸಲಾಗಿದೆ.
 

ಯೂನಿಕೋಡ್ನ ಬಳಕೆ

ಹೀಗೆ ಸಿದ್ಧವಾಗಿರುವ ಕನ್ನಡದ ಮೂಲಾಕ್ಷರಗಳು ಮತ್ತು ಹಲವು ಅಕ್ಷರಚಿಹ್ನೆಗಳಿಗಾಗಿ ನಿಗದಿಪಡಿಸಿರುವ ಯೂನಿಕೋಡ್ ಸಂಖ್ಯಾಸಂಕೇತಗಳನ್ನು ಗಣಕಗಳಲ್ಲಿ ಕನ್ನಡದ ಲಿಪಿಯ ದಾಖಲೆಗಾಗಿ ಬಳಸಬೇಕಾಗಿದೆ. ಹೀಗೆ ದಾಖಲಾ ಗುವ ಮೂಲಾಕ್ಷರ ಸಂಕೇತಗಳನ್ನು ಗಣಕದ ತೆರೆಯ ಮೇಲೆ ಮೂಡುವ ಅಕ್ಷರಭಾಗಗಳ ಬೇರೊಂದು ಸಂಕೇತ ವ್ಯವಸ್ಥೆಗೆ ಪರಿವರ್ತಿಸಬೇಕು; ಅಕ್ಷರಗಳನ್ನು ತೆರೆಯ ಮೇಲೆ ಮೂಡಿಸುವ/ ಕಾಗದದ ಮೇಲೆ ಮುದ್ರಿಸುವ ಪ್ರಕ್ರಿಯೆಗಳಿಗೆ ಅಗತ್ಯವಾದ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಬೇಕು. ಮುಖ್ಯವಾಗಿ ಮೈಕ್ರೋಸಾಫ್ಟ್ ಕಂಪನಿಯವರೇ ತಮ್ಮ ವಿಂಡೋಸ್ ಆವೃತ್ತಿಗಳಲ್ಲಿ ಕನ್ನಡವನ್ನು ನೀಡಬಹುದು. ಈ ಯಾವುದೇ ಪ್ರಯತ್ನವಾಗಲೀ ಅದು ಕನ್ನಡದ ಜಾಯಮಾನಕ್ಕೆ ಅನುಗುಣವಾಗಿರಬೇಕು; ಭಾಷೆ ಹಾಗೂ ಬರವಣಿಗೆಯ ಎಲ್ಲ ಸಾಧ್ಯತೆಗಳಿಗೂ ಸ್ಪಂದಿಸಬೇಕು; ಅಕಾರಾದಿ ವರ್ಗೀಕರಣ ಮುಂತಾದ ಅನೇಕ ಭಾಷಾ ಸಂಬಂಧಿತ ಸಮಸ್ಯೆಗಳನ್ನು ಯಶಸ್ವಿ ಯಾಗಿ ಪರಿಹರಿಸಿಕೊಡಬೇಕು.
 

ಮೈಕ್ರೋಸಾಫ್ಟ್, ಯೂನಿಸ್ಕ್ರೈಬ್ ಇತ್ಯಾದಿ

ಗಣಕಗಳಲ್ಲಿ ಕನ್ನಡವೇ ಅಲ್ಲದೆ ಇತರ ಭಾರತೀಯ ಭಾಷೆಗಳನ್ನು ನೀಡಲು ಮೈಕ್ರೋಸಾಫ್ಟ್ನ ಪ್ರಯತ್ನ ಈಗ ಸಾಗಿದೆ. ಮೈಕ್ರೋಸಾಫ್ಟ್ ಕಂಪನಿಯವರೇ ನೇರವಾಗಿ ಈ ಕ್ರಿಯೆಗಳಲ್ಲಿ ಪಾಲ್ಗೊಂಡು ತಮ್ಮ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕನ್ನಡವನ್ನು ನೀಡಲಾರಂಭಿಸಿದ್ದಾರೆ. ಈ ಹಾದಿಯಲ್ಲಿ ಅವರು ಮುನ್ನಡೆದಿರುವುದು ಸ್ವಾಗತಾರ್ಹ ಹಾಗೂ ಅಭಿನಂದ ನಾರ್ಹ. ಸದ್ಯದಲ್ಲಿ ವಿಂಡೋಸ್ ಎಕ್ಸ್ಪಿಯಿಂದ ಆರಂಭಗೊಂಡು ಮುಂದಿನ ಆವೃತ್ತಿಗಳಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ ಎಂಬು ದನ್ನು ನಾವು ಗಮನಿಸಬೇಕು. ಈ ದಿಸೆಯಲ್ಲಿ ಕನ್ನಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹಾಗೂ ಪರಿಹಾರಗಳನ್ನು ಅವರಿಗೆ ಸ್ಪಷ್ಟವಾಗಿಯೂ ಮತ್ತು ವಿವರವಾಗಿಯೂ ತಿಳಿಸಲಾಗಿದೆ. ಈ ದಿಕ್ಕಿನಲ್ಲಿ ಗಣಕಗಳಲ್ಲಿ ದಾಖಲಾಗುವ ಭಾರತೀಯ ಭಾಷೆಗಳ ಮೂಲಾಕ್ಷರಗಳ ಯೂನಿಕೋಡ್ ಸಂಕೇತಗಳನ್ನು ವೀಕ್ಷಣೆ / ಮುದ್ರಣಕ್ಕಾಗಿ ಅಗತ್ಯವಾದ ಅಕ್ಷರಭಾಗಗಳ ಸಂಕೇತ ಗಳನ್ನಾಗಿ ಪರಿವರ್ತಿಸಲು ಮೈಕ್ರೋಸಾಫ್ಟ್ ಕಂಪನಿಯು ಯೂನಿಸ್ಕ್ರೈಬ್ ಎಂಬ ಒಂದು ತಂತ್ರಾಂಶವನ್ನು ಸಿದ್ಧಪಡಿಸಿದೆ. ಯಾವುದೇ ಭಾರತೀಯ ಭಾಷೆಗಾದರೂ ಈ ನಿರ್ದಿಷ್ಟ ತಂತ್ರಾಂಶವನ್ನೇ ಬಳಸಲಾಗುತ್ತದೆ. ಅರ್ಕಾವೊತ್ತು ಮುಂತಾದ ಹಲವಾರು ಸಮಸ್ಯೆಗಳು ಕನ್ನಡಕ್ಕೇ ಅಲ್ಲದೆ ಇತರ ಭಾಷೆಗಳಲ್ಲೂ ಇವೆ. ಇವುಗಳಿಗೆ ಮೈಕ್ರೋಸಾಫ್ಟ್ ಕಂಪನಿಯವರು ಸೂಕ್ತವಾಗಿ ಸ್ಪಂದಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ವಿಂಡೋಸ್ ಎಕ್ಸ್ಪಿಗಿಂತ ಮೊದಲಿನ ಆವೃತ್ತಿಗಳು ಇನ್ನೂ ಬಹಳ ಕಾಲ ಬಳಕೆಯಲ್ಲಿರುವುದರಿಂದ ಅವುಗಳಲ್ಲಿ ಎಂಟು ಅಂಕಿಸ್ಥಾನಗಳ ಆಸ್ಕಿ ಶಿಷ್ಟತೆಗೆ ಬದಲಿಸಿ ಬಳಕೆದಾರರಿಗೆ ಯಾವ ತೊಂದರೆಯುಂಟಾಗದಂತೆ ಮಾಹಿತಿಗಳನ್ನು ಒದಗಿಸುವಂತಹ ಹಿಮ್ಮುಖ ಬಳಕೆಯ ಅವಕಾಶವನ್ನೂ ಯೂನಿಸ್ಕ್ರೈಬ್ ನೀಡಬೇಕೆಂಬ ಬೇಡಿಕೆಗಳೂ ಇವೆ. ಸೆಪ್ಟಂಬರ್ 24-26, 2003 ದೆಹಲಿಯಲ್ಲಿ ನಡೆದ ಯೂನಿಕೋಡ್ ಕಾರ್ಯಾಗಾರದಲ್ಲಿ ಈ ವಿಚಾರಗಳನ್ನು ಮೈಕ್ರೋಸಾಫ್ಟ್ ಕಂಪನಿಯ ಪ್ರತಿನಿಧಿಗಳಿಗೆ ತಿಳಿಸಲಾಗಿದೆ. 
 

ಕನ್ನಡಿಗರ ಒತ್ತಾಯ

ಈಗಾಗಲೇ ತಿಳಿಸಿದಂತೆ, ಯೂನಿಕೋಡ್ ಕನ್ಸೋರ್ಷಿಯಂ ಸಭೆಯು 2003 ಸೆಪ್ಟಂಬರ್ ಮೊದಲವಾರದಲ್ಲಿ ನಡೆದು ಯೂನಿಕೋಡ್ನ ನಾಲ್ಕನೆಯ ಆವೃತ್ತಿಯು ಅಧಿಕೃತವಾಗಿ ಅಂಗೀಕಾರಗೊಂಡಿದೆ. ಇತ್ತೀಚೆಗೆ ಯೂನಿಕೋಡ್ನ 4.1ನೆಯ ಆವೃತ್ತಿಯೂ ಹೊರಬಂದಿದೆ. ಇದಕ್ಕೆ ಪೂರ್ವಭಾವಿಯಾಗಿ ಕಳೆದ ವರ್ಷ ಜುಲೈ ತಿಂಗಳಲ್ಲಿ ಕನ್ನಡಾಭಿಮಾನಿಗಳಾದ ನೂರಾರು ಮಿತ್ರರು ಯೂನಿಕೋಡ್ ಕನ್ಸೋರ್ಷಿಯಂನ ತಾಂತ್ರಿಕ ಸಮಿತಿಯ ಸದಸ್ಯರಿಗೆ ವಿದ್ಯುನ್ಮಾನ ಅಂಚೆಯ (ಇ-ಮೇಲ್) ಮೂಲಕ ಪತ್ರಗಳನ್ನು ಬರೆದು ಯೂನಿಕೋಡ್ನ ನಾಲ್ಕನೆಯ ಆವೃತ್ತಿಯಲ್ಲಿ ಕನ್ನಡಕ್ಕೆ  ಅಗತ್ಯವಾದ ಬದಲಾವಣೆಗಳನ್ನು ಅಳವಡಿಸಲು ಒತ್ತಾಯಿಸಿದ್ದರು. ಇದು ಅತ್ಯುತ್ತಮ ಪರಿಣಾಮ ಉಂಟುಮಾಡಿತು. ಈ ಬಗ್ಗೆ ಯೂನಿಕೋಡ್ ಕನ್ಸೋರ್ಷಿಯಂನ ತಾಂತ್ರಿಕ ಸಮಿತಿಯ ಅಧ್ಯಕ್ಷರೊಡನೆ ಸಂವಾದ ನಡೆಸಿ ಪೂರ್ಣ ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ. ಕನ್ನಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಅವರು ಅರ್ಥೈಸಿಕೊಂಡು ಈ ಬಗ್ಗೆ ಸೂಕ್ತ ವಿವರಣೆಗಳನ್ನು ನೀಡಿದ್ದಾರೆ. ಅವರಿಗೆ ಕನ್ನಡಿಗರೆಲ್ಲರ ಅಭಿನಂದನೆಗಳು ಸಲ್ಲಬೇಕು. ಇದೊಂದು ಸ್ವಾಗತಾರ್ಹ ಹಾಗೂ ಕನ್ನಡದ ದೃಷ್ಟಿಯಿಂದ ಮಹತ್ವಪೂರ್ಣ ಬೆಳವಣಿಗೆ. ಒಟ್ಟಿನಲ್ಲಿ, ಕನ್ನಡದ ದೃಷ್ಟಿಯಿಂದ ಸದ್ಯದ ಬಳಕೆಗೆ ಸಮರ್ಪಕವೆನಿಸುವ ಯೂನಿಕೋಡ್ ಆವೃತ್ತಿ ಪ್ರಕಟವಾಗಿರುವುದರಿಂದ ಗಣಕೀಕರಣದಲ್ಲಿ ಕನ್ನಡದ ಬಳಕೆಯು ನೂತನ ಆಯಾಮವನ್ನು ಪಡೆಯಲಿದೆ.
 

ಕೃತಜ್ಞತೆಗಳು

ಯೂನಿಕೋಡ್ಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ನಡೆದ ಸಭೆಗಳಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ಭಾಗವಹಿಸಿ ಅಲ್ಲಿ ಕನ್ನಡದ ಸಮಸ್ಯೆಗಳನ್ನು ಚರ್ಚಿಸಬೇಕೆಂದು ನನಗೆ ಸೂಚಿಸಿದ ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳಿಗೆ, ವಿ-ಅಂಚೆ ಮೂಲಕ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶಮಾಡಿಕೊಟ್ಟಿದ್ದಕ್ಕಾಗಿ ಯೂನಿಕೋಡ್ ಕನ್ಸೋರ್ಷಿಯಂನ ತಾಂತ್ರಿಕ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಮತ್ತು ನನ್ನ ಕೋರಿಕೆಯನ್ನು ಮನ್ನಿಸಿ ಯೂನಿಕೋಡ್ ಕನ್ಸೋರ್ಷಿಯಂಗೆ ಪತ್ರಗಳನ್ನು ಬರೆದು ಅಲ್ಲಿನ ಪರಿಣತರು ಕನ್ನಡದ ಬಗ್ಗೆ ಕಾಳಜಿಯನ್ನು ವಹಿಸುವುದರಲ್ಲಿ ಮಹತ್ತರ ಪಾತ್ರವನ್ನು ವಹಿಸಿದ ಎಲ್ಲ ಕನ್ನಡ ಮಿತ್ರರಿಗೆ ನನ್ನ ಹೃತ್ಪೂರ್ವಕ ವಂದನೆಗಳು.

(ಜೂನ್, 2004)

ಚಿ ವಿ ಶ್ರೀನಾಥಶಾಸ್ತ್ರೀ

ಪ್ರಧಾನ ಕಾರ್ಯದರ್ಶಿ, ಕನ್ನಡ ಗಣಕ ಪರಿಷತ್ತು, ಬೆಂಗಳೂರು 560 019

ದೂ. (080) 26615972